ಕನಸುಗಳಿಗೆ ರೆಕ್ಕೆ ಮೂಡಿದಾಗ… ಉಡುಪಿ ಪ್ರಾಡಕ್ಟ್ಸ್
ಬೆಂಗಳೂರು ಮೂಲದ ‘ಉಡುಪಿ ಪ್ರಾಡಕ್ಸ್’ನ ಮಾಲೀಕರಾಗಿರುವ ಪದ್ಮಜ ಅವರು, ಉಪ್ಪಿನಕಾಯಿ, ಕಷಾಯ ಪುಡಿ, ಗಿಡಮೂಲಿಕೆಗಳ ಕೇಶ ತೈಲ ಉತ್ಪನ್ನಗಳ ವಹಿವಾಟನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವುದನ್ನು ಗೀತಾ ಕುಂದಾಪುರ ಅವರು ಇಲ್ಲಿ ವಿವರಿಸಿದ್ದಾರೆ.
ದಶಕಗಳ ಹಿಂದೆ, ಹೆಣ್ಣು ಮಕ್ಕಳಿಗೇಕೆ ಓದು. ಹೇಗಿದ್ದರೂ ಗಂಡನ ಮನೆಗೆ ಸೇರುವವಳು. ಅಡಿಗೆ, ಮನೆ ಕೆಲಸ ಸರಿಯಾಗಿ ಮಾಡಿದರೆ ಸಾಕು ಎಂಬ ಧೋರಣೆ ಇತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರುನವರಾದ ಪದ್ಮಜಾರ ವಿಷಯದಲ್ಲಿಯೂ ಹಾಗೆಯೇ ಆಗಿತ್ತು. 19ನೇ ವಯಸ್ಸಿಗೇ ಮದುವೆ ನಿಶ್ಚಯವಾಗಿದ್ದರಿಂದ ವಿದ್ಯಾಭ್ಯಾಸ ಪಿಯುಸಿಗೆ ಮೊಟಕುಗೊಂಡಿತ್ತು. ಶಿಕ್ಷಣ ಪೂರ್ಣಗೊಳಿಸಲಾರದ ಪದ್ಮಜ ಅವರಲ್ಲಿ ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಮನದೊಳಗೆ ಸದಾ ತುಡಿಯುತ್ತಲೇ ಇತ್ತು. ಆದರೆ ಅದಕ್ಕೆ ಬಹಳ ವರ್ಷಗಳವರೆಗೆ ಕಾಲ ಕೂಡ ಬಂದಿರಲಿಲ್ಲ.
ಮಕ್ಕಳು ದೊಡ್ಡವರಾಗಿ ಶಾಲೆಗೆ ಹೋಗಲು ಶುರುಮಾಡಿದಾಗ ಅಮ್ಮ ಮತ್ತು ಅತ್ತೆಯಿಂದ ಕಲಿತ, ಮನದ ಮೂಲೆಯಲ್ಲಿ ಕೂತ ಪಾಠಗಳು ಕನಸ್ಸಿನಲ್ಲಿ ಬರತೊಡಗಿದವು. ಆ ಕನಸುಗಳನ್ನು ನನಸಾಗಿಸಲು ನಿರ್ಧರಿಸಿದರು. ಇದಕ್ಕೆ ಪೂರಕವಾಗಿ ತಂಗಿ ಡಾಟ ಶೈಲಜಾ, ಅಕ್ಕನಿಗೆ ವಿವಿಧ ಗಿಡಮೂಲಿಕೆಗಳ ರಸ ಹಾಗೂ ಚಿಕ್ಕ ಪುಟ್ಟ ಆಯುರ್ವೇಧ ಔಷಧಿ ಮಾಡುವುದನ್ನು ಕಲಿಸಿದರು.
ಮದುವೆಗೆ ಮುನ್ನ ಅಡುಗೆ ಜತೆಗೆ ಕಷಾಯ, ಹಲವು ತರಹದ ಪುಡಿಗಳನ್ನು ಮಾಡುವುದನ್ನು ಅಮ್ಮನಿಂದಲೇ ಕಲಿತಿದ್ದರು. ಅಡುಗೆಯಲ್ಲಿ ಪರಿಣತರಾಗಿದ್ದ ಅತ್ತೆಯಿಂದಲೂ ಹಲವು ಬಗೆಯ ಉಪ್ಪಿನ ಕಾಯಿ, ಚಟ್ನಿ, ತೊಕ್ಕು, ಲೇಹಗಳ ತಯಾರಿಕೆಯ ಗುಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು. ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ತುಡಿತ ನನಸಾಗಿಸಲು ಅವಕಾಶ ಸಿಕ್ಕಾಗ ತಮ್ಮಲ್ಲಿನ ಈ ಕೌಶಲವನ್ನೇ ಸದ್ಬಳಕೆ ಮಾಡಿಕೊಳ್ಳಬೇಕೆಂದು ಉದ್ದೇಶಿಸಿದ್ದರು.
ತಂಗಿಯ ಬೆಂಬಲ, ಗಂಡನ ಪ್ರೋತ್ಸಾಹದ ಫಲವಾಗಿ 2003ರಲ್ಲಿ ಲೆಮನ್ ಗ್ರಾಸ್ ಜ್ಯೂಸ್, ಕಶಾಯ ಪುಡಿ, ರಸಂ ಪುಡಿ, ಸಾಂಬಾರ ಪುಡಿ ತಯಾರಿಸಿ ಮಾರುಕಟ್ಟೆಗೆ ಮೊದಲ ಬಾರಿಗೆ ತಂದರು. ಸಣ್ಣ ಪ್ರಮಾಣದಲ್ಲಿ ‘ಉಡುಪಿ ಪ್ರಾಡಕ್ಸ್’ ಹೆಸರಿನಲ್ಲಿ ಶುರು ಮಾಡಿದ ಸಂಸ್ಥೆ ಈಗ ಸಾಕಷ್ಟು ದೊಡ್ಡದಾಗಿದೆ. ಮನೆ ಹತ್ತಿರ ಇರುವ ಕಾರ್ಖಾನೆಯಲ್ಲಿ ಈಗ ಸುಮಾರು 10 ವಿಧದ ಗಿಡಮೂಲಿಕೆ ರಸ, (ಹರ್ಬಲ ಜ್ಯೂಸ್), ಏಳೆಂಟು ತರಹದ ಚಟ್ನಿಗಳು, ಮೂರ್ನಾಲ್ಕು ಬಗೆಯ ಉಪ್ಪಿನಕಾಯಿ, ಕಷಾಯ ಪುಡಿಗಳು, ಗಿಡಮೂಲಿಕೆಗಳ ಕೇಶ ತೈಲ ಹೀಗೆ ಹಲವಾರು ಬಗೆಯ ಉತ್ಪನ್ನಗಳು ಸಿದ್ಧಗೊಂಡು ಮಾರುಕಟ್ಟೆಗೆ ಬರುತ್ತಿವೆ.
ಪುಟ್ಟ ಕಾರ್ಖಾನೆಯಲ್ಲಿ ಹತ್ತರಿಂದ ಹನ್ನೆರಡು ಜನರು ದುಡಿಯುತ್ತಿದ್ದಾರೆ. ಯಾವುದೇ ರಾಸಾಯನಿಕ ಉಪಯೋಗಿಸದೆ, ಕೇವಲ ಸಾವಯವ (organic) ಉತ್ಪನ್ನಗಳಿಂದ ಅತ್ಯಂತ ಶುದ್ಧವಾದ ಪರಿಸರದಲ್ಲಿ ಉಡುಪಿ ಪ್ರಾಡಕ್ಟ್ಸ್‌ಗಳು ತಯಾರಾಗುತ್ತಿವೆ.
ಮಾರುಕಟ್ಟೆ ವಿಸ್ತರಣೆ
ಈ ಉತ್ಪನ್ನಗಳು ಬೆಂಗಳೂರಲ್ಲಿ ಅಷ್ಟೇ ಅಲ್ಲದೆ ತುಮಕೂರು, ಭದ್ರಾವತಿ, ಶಿವಮೊಗ್ಗ, ಮೈಸೂರು, ಮಂಗಳೂರು, ದಕ್ಷಿಣಕನ್ನಡ, ಹುಬ್ಬಳ್ಳಿ, ಧಾರವಾಡ ಹೀಗೆ ಹಲವಾರು ಜಿಲ್ಲೆಗಳಲ್ಲಿ ಮಾರಾಟವಾಗುತ್ತಿವೆ. ಕೊತ್ತಂಬರಿ ಸೊಪ್ಪಿನ ಚಟ್ನಿ ಮತ್ತು ಅಪ್ಪೆ ಮಿಡಿ ಉಪ್ಪಿನಕಾಯಿ ವಿದೇಶಕ್ಕೂ ಕಾಲಿಟ್ಟಿದೆ. ರುಚಿ ನೋಡಿದವರು ವಿದೇಶಕ್ಕೆ ಹೊರಟಾಗ ತಮ್ಮ ಆಪ್ತರಿಗೋಸ್ಕರ ಕಡ್ಡಾಯವಾಗಿ ತೆಗೆದುಕೊಂಡು ಹೋಗುವ ಸರಕಾಗಿಬಿಟ್ಟಿದೆ.
‘ಉಡುಪಿ ಪ್ರಾಡಕ್ಟ್ಸ್’ ಸಣ್ಣ ಕೈಗಾರಿಕೆಯಾಗಿ ನೋಂದಣಿಯಾಗಿದೆ. ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು (CFTRI), ಈ ಉತ್ಪನ್ನಗಳ ಶುದ್ಧತೆಯನ್ನು ಪರೀಕ್ಷಿಸಿ ಅನುಮೋದನೆ ನೀಡಿದೆ. ಉದ್ಯಮಕ್ಕೆ ಬೇಕಾಗುವ ಕಚ್ಚಾ ಸರಕನ್ನು ಬೆಂಗಳೂರಿನ ಸುತ್ತಮುತ್ತ ಇರುವ ಹಳ್ಳಿಗಳಿಂದ ಖರೀದಿಸಲಾಗುತ್ತಿದೆ. ಈ ಉತ್ಪನ್ನಗಳು ರಾಸಾಯನಿಕಗಳಿಂದ ಮುಕ್ತವಾಗಿರುವುದನ್ನು ಖಾತ್ರಿಗೊಳಿಸಲಾಗುತ್ತದೆ. ಉಪ್ಪಿನಕಾಯಿಗೆ ಬೇಕಾಗುವ ಅಪ್ಪೆ ಮಿಡಿ ಮಾತ್ರ ಸಾಗರದ ರಿಪ್ಪನಪೇಟೆಯಿಂದ ತರಿಸಲಾಗುವುದು.
ಪದ್ಮಜ ಅವರು ಹಲವಾರು ಉತ್ಸವ ಹಾಗೂ ವಸ್ತುಪ್ರದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಕೆನರಾ ಬ್ಯಾಂಕ್, ಕರ್ನಾಟಕ ಸಣ್ಣ ಕೈಗಾರಿಕಾ ಸಂಘ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರದರ್ಶನ, ಕರಾವಳಿ ಉತ್ಸವ – ನಮ್ಮೂರ ಹಬ್ಬ– ಹೀಗೆ ಹಲವಾರು ಕಡೆಗಳಲ್ಲಿ ‘ಉಡುಪಿ ಪ್ರಾಡಕ್ಸ್’ನ ಉತ್ಪನ್ನಗಳು ಪ್ರದರ್ಶನಗೊಂಡು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಮೂಲಕ ಮಾರುಕಟ್ಟೆಯನ್ನೂ ವಿಸ್ತರಿಸಿಕೊಂಡಿವೆ.
ಸಾವಯವ ಆಹಾರ ಪದಾರ್ಥಗಳ ಮಾರಾಟ ಮಳಿಗೆ
ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘದ (ಅವೇಕ್) ಸದಸ್ಯರೂ ಆಗಿರುವ ಪದ್ಮಜ ಅವರನ್ನು, ‘ನಿಮ್ಮ ಮುಂದಿನ ಯೋಜನೆ ಏನು?’ ಎಂದು ಪ್ರಶ್ನಿಸಿದಾಗ, ‘ಆರೋಗ್ಯಕರ ಆಹಾರ ತಯಾರಿಕೆಯ ಬಗ್ಗೆ ಪುಸ್ತಕ ಬರೆಯುವ ಆಲೋಚನೆ ಇದೆ. ಸರಿಯಾದ ಹಂಚಿಕೆದಾರರು ಸಿಕ್ಕಿದರೆ ರಾಜ್ಯದ ಹೊರಗೂ ವಹಿವಾಟು ವಿಸ್ತರಿಸುವ ಆಲೋಚನೆ ಇದೆ’ ಎನ್ನುತ್ತಾರೆ.
‘ಸಣ್ಣ ಉದ್ಯಮಿಗಳಿಗೆ ಸರಕಾರ ಕೊಡುವ ಸಾಲ, ಭೂಮಿ ಹಂಚಿಕೆ ಮತ್ತಿತರ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸಾವಯವ ಆಹಾರ ಪದಾರ್ಥಗಳ ಮಾರಾಟ ಮಳಿಗೆಯನ್ನು ಶುರು ಮಾಡುವ ಆಸೆ ಇದೆ’ ಎಂದು ಹೇಳುತ್ತಾರೆ.
ಪದ್ಮಜ ಸಣ್ಣ ಉದ್ಯಮದಾರರಿಗೆ ಇರುವ ತೊಂದರೆಯನ್ನು ವಿವರಿಸುತ್ತ, ದೊಡ್ಡ ಉದ್ಯಮಗಳಿಂದ ಎದುರಾಗುವ ಸ್ಪರ್ಧೆ, ಸರಿಯಾದ ಕೆಲಸಗಾರರು ಸಿಗದೇ ಇರುವುದು, ಯಾವಾಗಲೂ ಏರಿಳಿತ ಕಾಣುವ ಕಚ್ಚಾವಸ್ತುವಿನ ಬೆಲೆಯು ತಮ್ಮ ಉದ್ಯಮ ಎದುರಿಸುತ್ತಿರುವ ಮುಖ್ಯ ತೊಂದರೆಯಾಗಿದೆ’ ಎಂದು ಹೇಳುತ್ತಾರೆ.
ಹಲವು ತೊಂದರೆಗಳ ನಡುವೆಯೂ ತಾವು ಬೆಳೆಸಿದ ಉದ್ಯಮವನ್ನು ಮುಂದೆ ಕೊಂಡೊಯ್ಯುತ್ತಿರುವ ಪದ್ಮಜ, ಸದಾ ಹುರಿದುಂಬಿಸಿ, ಸಹಕರಿಸುವ ಗಂಡ ಮತ್ತು ಪ್ರೋತ್ಸಾಹಿಸುವ ಮಕ್ಕಳ ಸಹಕಾರ ಶ್ಲಾಘಿಸುತ್ತಾರೆ.
‘ದುಡಿಯಲು ಕೆಲಸ ಇಲ್ಲವೆಂದು ಕೊರಗಬೇಡಿ. ನಿಮಗೆ ಗೊತ್ತಿರುವ ವಿಷಯದಲ್ಲಿ ಸ್ವಯಂ ಉದ್ಯೋಗ ಕೈಗೊಂಡರೆ ನಿಮಗೆ ಜಯ ಖಂಡಿತ, ಆತ್ಮವಿಶ್ವಾಸ ಬೆಳಸಿಕೊಳ್ಳಿ’ ಎಂದೂ ಅವರು ಕಿವಿಮಾತು ಹೇಳುತ್ತಾರೆ.
Click here to buy Udupi Food Products: https://homelysupermarket.com/store/udupi-food-products